Home> Karnataka
Advertisement

ಧಾರವಾಡದಲ್ಲಿ ದಲಿತ ಸೂರ್ಯನ ಹೆಜ್ಜೆಗುರುತು -ಮನೋಜಕುಮಾರ ಗುದ್ದಿ ಅವರ ಬರಹ

‘ಇಲ್ಲಿ ಏಕೆ ಹಾಸ್ಟೆಲ್‌ ಆರಂಭಿಸಬೇಕಾಯಿತು ಎಂಬುದನ್ನು ಅಂಬೇಡ್ಕರ್‌ ಭಾಷಣಗಳು ಸಂಪುಟ 2ರಲ್ಲಿ ಸ್ವತಃ ಅಂಬೇಡ್ಕರ್ ಬರೆದುಕೊಂಡಿದ್ದಾರೆ. ರಮಾಬಾಯಿ ಅವರು ಎರಡು ವರ್ಷ ಧಾರವಾಡದಲ್ಲಿಯೇ ನೆಲೆಸಿದ್ದರು.

ಧಾರವಾಡದಲ್ಲಿ ದಲಿತ ಸೂರ್ಯನ ಹೆಜ್ಜೆಗುರುತು -ಮನೋಜಕುಮಾರ ಗುದ್ದಿ ಅವರ ಬರಹ

ಹಲವಾರು ಕೆಲಸಗಳ ಒತ್ತಡದ ಮಧ್ಯೆಯೂ ದಲಿತರಿಗೆ ಅನ್ಯಾಯವಾಗುವುದನ್ನು ಅವರು ಎಂದಿಗೂ ಸಹಿಸುತ್ತಿರಲಿಲ್ಲ. ಒಬ್ಬ ಮಹಾರ್‌ ಜಾತಿಯ ಹುಡುಗನಿಗೆ ಪ್ರತಿಷ್ಠಿತ ಕಾಲೇಜು ಆತನ ಜಾತಿಯ ಕಾರಣಕ್ಕಾಗಿ ಪ್ರವೇಶ ಕೊಡುವುದಿಲ್ಲ. ಇದೇ ಘಟನೆ ಅಂಬೇಡ್ಕರ್‌ ಅವರು ಧಾರವಾಡದಲ್ಲಿ ಪರಿಶಿಷ್ಟ ಜಾತಿಯ ಹುಡುಗರಿಗಾಗಿ ಹಾಸ್ಟೆಲ್‌ ಆರಂಭಿಸಲು ಪ್ರೇರಣೆ ನೀಡಿತು. ಅದುವೇ ಇಂದಿನ ಬುದ್ಧರಕ್ಕಿಥ ಪ್ರಾಥಮಿಕ ಹಾಗೂ ಪ್ರೌಢಶಾಲೆಯಾಗಿ ಬದಲಾಗಿದೆ.

ಕಾಲೇಜೊಂದು ತನ್ನ ಮಗನಿಗೆ ಪ್ರವೇಶ ನೀಡದಿರುವುದನ್ನು ಪ್ರಶ್ನಿಸಿ ಮಹಾರ್‌ ಜಾತಿಗೆ ಸೇರಿದ ವ್ಯಕ್ತಿ ಕೋರ್ಟ್‌ ಮೆಟ್ಟಿಲೇರಿದ ಸಂಗತಿ ಅಂಬೇಡ್ಕರ್‌ ಅವರ ಗಮನ ಸೆಳೆಯುತ್ತದೆ. ಹೀಗಾಗಿ, ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಬರುವ ನಿಟ್ಟಿನಲ್ಲಿ ಅಂಬೇಡ್ಕರ್‌ ಅವರು 1929ರಲ್ಲಿ ಧಾರವಾಡಕ್ಕೆ ಬಂದು ಹಾಸ್ಟೆಲ್‌ ಆರಂಭಿಸುತ್ತಾರೆ. ಸುಮಾರು 15ರಿಂದ 20 ಬಡ ಮಕ್ಕಳು ಹಾಸ್ಟೆಲ್‌ನಲ್ಲಿ ಊಟ ಮಾಡಿ ಶಾಲೆಗೆ ಹೋಗುತ್ತಿರುತ್ತಾರೆ. ಸ್ವತಃ ಅಂಬೇಡ್ಕರ್‌ ಪತ್ನಿ ರಮಾಬಾಯಿ ಮಕ್ಕಳಿಗೆ ಅಡುಗೆ ಮಾಡಿ ಉಣಬಡಿಸುತ್ತಾರೆ. ಇಂಗ್ಲೆಂಡಿನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲು ಅಂಬೇಡ್ಕರ್‌ ಅವರು ತೆರಳಿದ ಸಂದರ್ಭದಲ್ಲಿ ಹಾಸ್ಟೆಲ್‌ ನಡೆಸಲು ಸಾಕಷ್ಟು ಹಣಕಾಸು ಅಡಚಣೆ ಉಂಟಾಗುತ್ತದೆ. ದಿನಸಿ ತಂದು ಅಡುಗೆ ಮಾಡಿಹಾಕಲೂ ದುಡ್ಡಿರುವುದಿಲ್ಲ. ಆದರೂ, ಧೃತಿಗೆಡದ ರಮಾಬಾಯಿ ತಮ್ಮ ಕೈಲಿದ್ದ ಚಿನ್ನದ ಬಳೆಗಳನ್ನು ಮಾರಾಟ ಮಾಡಿ ಮಕ್ಕಳಿಗೆ ಊಟ ಹಾಕುತ್ತಾರೆ. ಇದರ ನಿರ್ವಹಣೆಗಾಗಿ ಡಾ. ವರಾಳೆ ಎಂಬುವವರನ್ನೂ ನೇಮಕ ಮಾಡಲಾಗಿರುತ್ತದೆ.

fallbacks

‘ಡಿಪ್ರೆಸ್ಡ್‌ (ಶೋಷಿತ ಮಕ್ಕಳು) ಹಾಸ್ಟೆಲ್‌ ಎಂದೇ ಕರೆಯಲಾಗುವ ಈ ವಸತಿನಿಲಯದ ಮಕ್ಕಳಿಗೆ ಅಕ್ಷರಶಃ ಅನ್ನ ಹಾಕಿದ್ದ ರಮಾಬಾಯಿ ಅವರು 1935ರಲ್ಲಿ ತೀರಿಕೊಳ್ಳುತ್ತಾರೆ. ನಂತರ ದಲಿತ ನಾಯಕರಾಗಿದ್ದ ಬಿ. ಬಸವಲಿಂಗಪ್ಪನವರು ಈ ಹಾಸ್ಟೆಲ್‌ನ ನಿರ್ವಹಣೆಯನ್ನು ಒಪ್ಪಿಕೊಳ್ಳುತ್ತಾರೆ. ಪ್ರಸ್ತುತ ಹಿರಿಯ ದಲಿತ ಮುಖಂಡ ಎಫ್‌.ಎಚ್‌. ಜಕ್ಕಪ್ಪನವರ ಅವರು ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

‘ಇಲ್ಲಿ ಏಕೆ ಹಾಸ್ಟೆಲ್‌ ಆರಂಭಿಸಬೇಕಾಯಿತು ಎಂಬುದನ್ನು ಅಂಬೇಡ್ಕರ್‌ ಭಾಷಣಗಳು ಸಂಪುಟ 2ರಲ್ಲಿ ಸ್ವತಃ ಅಂಬೇಡ್ಕರ್ ಬರೆದುಕೊಂಡಿದ್ದಾರೆ. ರಮಾಬಾಯಿ ಅವರು ಎರಡು ವರ್ಷ ಧಾರವಾಡದಲ್ಲಿಯೇ ನೆಲೆಸಿದ್ದರು. ಅವರಿಗೆ ಕಾಯಿಲೆ ಬಂದಾಗಲೂ ಇಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಅಂಬೇಡ್ಕರ್‌ ಸಹ ಹಲವು ಬಾರಿ ಧಾರವಾಡಕ್ಕೆ ಬಂದು ಹೋಗುತ್ತಿದ್ದರು’ ಎನ್ನುತ್ತಾರೆ ಬುದ್ಧರಕ್ಕಿಥ ಶಾಲೆಯಲ್ಲಿ ಶಿಕ್ಷಕರಾಗಿರುವ ಬಿ.ಕೆ. ಹಲಗಿ.

ರಮಾಬಾಯಿ ಅವರು ವಾಸಿಸಿದ್ದ ಕೊಠಡಿಯನ್ನು ಈಗಲೂ ಮೊದಲಿನ ಸ್ಥಿತಿಯಲ್ಲಿಯೇ ಇಡಲಾಗಿದೆ. ಕರ್ನಾಟಕ ಸರ್ಕಾರ ಕಳೆದ ಬಜೆಟ್‌ನಲ್ಲಿ ಅಂಬೇಡ್ಕರ್‌ ನೆನಪಿಗಾಗಿ ಬುದ್ಧ ವಿಹಾರ ನಿರ್ಮಿಸಲು ₹ 3 ಕೋಟಿ ಅನುದಾನ ನೀಡಿತ್ತು. ಅದನ್ನು ಬಳಸಿಕೊಂಡು ಸುಮಾರು 5 ಸಾವಿರ ಚದರ ಅಡಿ ಪ್ರದೇಶದಲ್ಲಿ ಬೃಹತ್‌ ವಿಹಾರ ನಿರ್ಮಾಣಗೊಳ್ಳುತ್ತಿದೆ.

5ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ 240 ಮಕ್ಕಳು ಅಂಬೇಡ್ಕರ್‌ ನಿರ್ಮಿಸಿದ ಈ ಶಾಲೆ ಹಾಗೂ ಹಾಸ್ಟೆಲ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅನುದಾನಿತ ಶಿಕ್ಷಣ ಸಂಸ್ಥೆಯಾಗಿರುವ ಈ ಶಾಲೆಯಲ್ಲಿ ಪ್ರಸ್ತುತ 10 ಶಿಕ್ಷಕರು ಹಾಗೂ 9 ಶಿಕ್ಷಕೇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪ್ರವೇಶ ಪರೀಕ್ಷೆಯ ಮೂಲಕವೇ ತರಗತಿಗಳಿಗೆ ಪ್ರವೇಶ ನೀಡಲಾಗುತ್ತದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎನ್ನುತ್ತಾರೆ ಶಾಲೆಯ ಶಿಕ್ಷಕ ಸಿಬ್ಬಂದಿ.

- ಮನೋಜಕುಮಾರ್‌ ಗುದ್ದಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Read More