ಆರ್‌ಸಿಬಿ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಇದ್ದಕ್ಕಿದ್ದಂತೆ ಈ ಐಪಿಎಲ್ ಲೀಗ್‌ನಿಂದ ಅನಿರ್ದಿಷ್ಟ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಆದರೆ, ಕ್ರಿಕೆಟಿಗನೊಬ್ಬ ಮಾನಸಿಕ ಆಯಾಸದಿಂದ ಇಂತಹ ನಿರ್ಧಾರ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಕ್ರಿಕೆಟಿಗರು ಈ ರೀತಿ ಮಾಡಿದ್ದಾರೆ.
ಆರ್‌ಸಿಬಿ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್‌ನಿಂದಾಗಿ ಐಪಿಎಲ್‌ನಿಂದ ಅನಿರ್ದಿಷ್ಟ ಅವಧಿಗೆ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಆರ್‌ಸಿಬಿ ಪಂದ್ಯದಿಂದ ಹೊರಗುಳಿದಿದ್ದ ಮ್ಯಾಕ್ಸ್‌ವೆಲ್ ಬಳಿಕ ಈ ನಿರ್ಧಾರ ಪ್ರಕಟಿಸಿದ್ದಾರೆ. ಇದಕ್ಕೇ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳೇ ಪ್ರಮುಖ ಕಾರಣ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ. ಆದರೆ, ಕ್ರಿಕೆಟಿಗನೊಬ್ಬ ಮಾನಸಿಕ ಆಯಾಸದಿಂದ ಇಂತಹ ನಿರ್ಧಾರ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಕ್ರಿಕೆಟಿಗರು ಈ ರೀತಿ ಮಾಡಿದ್ದಾರೆ. ಆ ಪ್ರಮುಖ ಆಟಗಾರರೆಂದರೆ...
ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಕಾಯಂ ಸದಸ್ಯರಾಗಿದ್ದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿ ಭಾರತಕ್ಕೆ ಮರಳಿದ್ದರು. ಈ ವೇಳೆ ಇದೇ ಕಾರಣವನ್ನು ನೀಡಿದ್ದರು.
2022 ರ ಏಷ್ಯಾ ಕಪ್ ಸಂದರ್ಭದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಒಂದು ತಿಂಗಳ ಕಾರ ವಿಶ್ರಾಂತಿ ತೆಗೆದುಕೊಂಡಿದ್ದರು. ವಿರಾಟ್ 2022 ರ ಏಷ್ಯಾ ಕಪ್‌ಗೆ ಸ್ವಲ್ಪ ಮೊದಲು ಒಂದು ತಿಂಗಳ ವಿರಾಮದಿಂದ ಹಿಂದಿರುಗಿದ ನಂತರ ತಮ್ಮ ಮಾನಸಿಕ ಆರೋಗ್ಯದ ಸವಾಲಿನ ಬಗ್ಗೆ ಬಹಿರಂಗವಾಗಿ ಹೇಳಿದ್ದರು. ಸಂದರ್ಶನವೊಂದರಲ್ಲಿ ಈ ಕುರಿತಂತೆ ಮಾತನಾಡಿದ್ದ ವಿರಾಟ್ ಕೊಹ್ಲಿ, ಮಾನಸಿಕವಾಗಿ ದೌರ್ಬಲ್ಯವಿದ್ದರೂ ಮತ್ತು ವಿಶ್ರಾಂತಿಯ ಅಗತ್ಯವಿದ್ದರೂ, ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ. ಆದರೆ, ಒಂದು ತಿಂಗಳ ವಿಶ್ರಾಂತಿ ನನಗೆ ಉಲ್ಲಾಸದ ಅನುಭವವನ್ನು ನೀಡಿತ್ತು ಎಂದಿದ್ದರು.
ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಟೋಕ್ಸ್, ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಜುಲೈ 2021 ರಲ್ಲಿ ಕ್ರಿಕೆಟ್‌ನಿಂದ ಅನಿರ್ದಿಷ್ಟ ವಿರಾಮವನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಈ ವೇಳೆ ಅವರು ತಾವು ಈ ಹಿಂದೆ ಹಲವಾರು ಬಾರಿ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿರುವುದಾಗಿ ತಿಳಿಸಿದ್ದರು.
ತಮ್ಮ ವೃತ್ತಿಜೀವನದ ಬಹುಪಾಲು ಇಂಗ್ಲೆಂಡ್ ಕ್ರಿಕೆಟ್ ತಂಡದ ಲೈನ್‌ಅಪ್‌ನಲ್ಲಿ ಪ್ರಮುಖ ಆಟಗಾರರಾಗಿದ್ದ ಜೊನಾಥನ್ ಟ್ರಾಟ್, ಒಂದು ಸಮಯದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ತೀವ್ರವಾಗಿ ಹೋರಾಡುತ್ತಿದ್ದರು. ಟ್ರಾಟ್ ಕೇವಲ ಒಂದು ಟೆಸ್ಟ್ ಆಡಿದ ನಂತರ 2013 ರ ಆಶಸ್ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದರು. ಇದಾದ ಬಳಿಕ 16 ತಿಂಗಳ ಕಾಲ ಕ್ರಿಕೆಟ್ ಆಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. 2015ರಲ್ಲಿ ಅವರು ಪುನರಾಗಮನಕ್ಕಾಗಿ ಪ್ರಯತ್ನಿಸಿದರು. ಆದರೂ, ಮಾನಸಿಕ ಒತ್ತಡದಿಂದಾಗಿ ಅವರಿಗೆ ಸಾಧ್ಯವಾಗಲಿಲ್ಲ.