ಮೂರನೇ ಬಾರಿಗೆ ದೇಶದ ಆಡಳಿತ ವಹಿಸಿಕೊಂಡ ಪ್ರಧಾನಿ ಮೋದಿಗೆ 74 ವರ್ಷ. ಸ್ವಚ್ಛ ರಾಜಕೀಯ ಇಮೇಜ್ ಹೊಂದಿರುವ ಪ್ರಧಾನಿ ದೊಡ್ಡ ಹೋರಾಟಗಳ ನಂತರ ಈ ಮಹತ್ವ ಹುದ್ದೆಯನ್ನು ತಲುಪಿದ್ದಾರೆ.
ತಮ್ಮನ್ನು ʼಚಾಯ್‌ವಾಲʼ ಎಂದು ಕರೆದುಕೊಳ್ಳುವ ಪ್ರಧಾನಿ, ತಮ್ಮ ಆರಂಭಿಕ ಜೀವನದ ಕಷ್ಟಗಳನ್ನು ದಾಟಿಕೊಂಡು ಮೊದಲು ಆರ್‌ಎಸ್‌ಎಸ್, ನಂತರ ಭಾರತೀಯ ಜನತಾ ಪಕ್ಷ, ಗುಜರಾತ್ ಮುಖ್ಯಮಂತ್ರಿ ಮತ್ತು ನಂತರ ದೇಶದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಹಂತವನ್ನು ತಲುಪಿದ ನಂತರ, ಜನರು ಪ್ರಧಾನಿ ಮೋದಿಯವರ ಆಸ್ತಿಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೊಂದಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ಅವರು ತಮ್ಮ ಆಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಒಟ್ಟು ಆಸ್ತಿಯನ್ನು 3.02 ಕೋಟಿ ರೂ. ಎಂದು ಘೋಷಿಸಿದ್ದಾರೆ. ಪ್ರಧಾನಿಯವರ ಆಸ್ತಿಗಳಲ್ಲಿ ಚರ ಆಸ್ತಿ ಮತ್ತು ಸ್ಥಿರ ಆಸ್ತಿ ಹಾಗೂ ಹೂಡಿಕೆಗಳು ಸೇರಿವೆ. 2019 ಮತ್ತು 2014 ರಲ್ಲಿ ಅವರು ಘೋಷಿಸಿದ ಘೋಷಣೆಗಳಿಗೆ ಹೋಲಿಸಿದರೆ, ಪ್ರಧಾನಿ ಮೋದಿಯವರ ಆಸ್ತಿ ಹೆಚ್ಚಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಮಾಡಿದ ಮಾಹಿತಿಯ ಪ್ರಕಾರ, 2019 ರಲ್ಲಿ ಅವರು 2.51 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡರೆ, 2014 ರಲ್ಲಿ ಅದು 1.66 ಕೋಟಿ ರೂ.ಗಳಾಗಿತ್ತು.
ಪ್ರಧಾನಿ ಮೋದಿಯವರ ಹೂಡಿಕೆಗಳಲ್ಲಿ ನಾಲ್ಕು ಚಿನ್ನದ ಉಂಗುರಗಳ ರೂಪದಲ್ಲಿ 2.67 ಲಕ್ಷ ರೂ. ಮೌಲ್ಯದ ಚಿನ್ನ ಸೇರಿದೆ. ಇದರ ಜೊತೆಗೆ, ಅವರು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ 9.12 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಎನ್‌ಎಸ್‌ಸಿಯಲ್ಲಿನ ಈ ಹೂಡಿಕೆಯು 2019 ರಲ್ಲಿ 7.61 ಲಕ್ಷದಿಂದ ಸುಮಾರು 2 ಲಕ್ಷ ಹೆಚ್ಚಾಗಿದೆ. ಇದರ ಜೊತೆಗೆ, ಪ್ರಧಾನಮಂತ್ರಿಯವರು 2024 ರ ಅಫಿಡವಿಟ್ ಪ್ರಕಾರ ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿ (ಎಫ್‌ಡಿ) 2.85 ಕೋಟಿ ರೂ.ಗಳನ್ನು ಹೊಂದಿದ್ದಾರೆ. ಅಂದಹಾಗೆ ಪ್ರಧಾನಿ ಮೋದಿಯವರು ಯಾವುದೇ ಭೂಮಿ ಅಥವಾ ಷೇರುಗಳನ್ನು ಹೊಂದಿಲ್ಲ, ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಗಳನ್ನು ಹೊಂದಿಲ್ಲ ಎಂಬುದನ್ನು ಉಲ್ಲೇಖಿಸಬೇಕಾದ ಸಂಗತಿ. ಅವರು ನೀಡಿದ ಮಾಹಿತಿಯ ಪ್ರಕಾರ ಮೋದಿ ಅವರು 52,920 ರೂ.ಗಳನ್ನು ನಗದು ರೂಪದಲ್ಲಿ ಹೊಂದಿದ್ದಾರೆ.
ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ, ಪ್ರಧಾನಿಯವರು ಜಶೋದಾಬೆನ್ ಅವರನ್ನು ತಮ್ಮ ಪತ್ನಿ ಎಂದು ಹೆಸರಿಸಿದ್ದರು. ಇನ್ನು ಗುಜರಾತ್ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿರುವುದಾಗಿ, ದೆಹಲಿ ವಿಶ್ವವಿದ್ಯಾಲಯದಿಂದ (1978) ಕಲಾ ಪದವಿ ಪಡೆದಿರುವುದಾಗಿ ಮತ್ತು 1967 ರಲ್ಲಿ ಗುಜರಾತ್ ಮಂಡಳಿಯಿಂದ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಾಗಿದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಮೋದಿ ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಬಾಕಿ ಇಲ್ಲ ಮತ್ತು ಅವರಿಗೆ ಯಾವುದೇ ಸರ್ಕಾರಿ ಬಾಕಿ ಇಲ್ಲ ಎಂದು ಘೋಷಿಸಿದ್ದಾರೆ.