Pahalgam Terror Attack: ಎಪ್ರಿಲ್ 22, 2025ರಂದು ಪಹಲ್ಗಾಮ್ ಬಳಿಯ ಸುಂದರ, ಪ್ರಶಾಂತ ಬೈಸರನ್ ಕಣಿವೆ ಒಂದು ದುಸ್ವಪ್ನವಾಗಿ ಬದಲಾಯಿತು. 2008ರ ಬಳಿಕ ಭಾರತದಲ್ಲಿ ನಡೆದ ಅತ್ಯಂತ ಘೋರವಾದ ಭಯೋತ್ಪಾದಕ ದಾಳಿಗಳಲ್ಲಿ ಇದು ಒಂದಾಗಿದ್ದು, ಒಂದು ಮಗು, ಓರ್ವ ನೇಪಾಳಿ ಪ್ರಜೆ ಸೇರಿದಂತೆ 26 ಪ್ರವಾಸಿಗರು ಭೀಕರವಾಗಿ ಹತ್ಯೆಯಾದರು. ಪಾಕಿಸ್ತಾನದ ಲಷ್ಕರ್ ಎ ತೈಬಾ ಭಯೋತ್ಪಾದಕ ಸಂಘಟನೆಯೊಡನೆ ಸಂಬಂಧ ಹೊಂದಿರುವ ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಎಂಬ ಗುಂಪಿನ ಭಯೋತ್ಪಾದಕರು ಈ ದಾಳಿ ನಡೆಸಿದ್ದರು. ಬಳಿಕ ಟಿಆರ್‌ಎಫ್ ತಾನು ಇದರಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದರೂ, ಅದು ತನ್ನ ಮೇಲಿನ ದೋಷಾರೋಪವನ್ನು ತಪ್ಪಿಸಿಕೊಳ್ಳಲು ನಡೆಸಿದ ಪ್ರಯತ್ನ ಎನ್ನಲಾಗಿದೆ.
ಇದೊಂದು ಭೀಕರ ಭಯೋತ್ಪಾದಕ ದಾಳಿ ಮಾತ್ರವಾಗಿರಲಿಲ್ಲ. ಬದಲಿಗೆ, ಇದು ಗಂಭೀರ ಗುಪ್ತಚರ ವೈಫಲ್ಯ, ಭದ್ರತಾ ದೋಷಗಳಿಗೆ ಸಾಕ್ಷಿಯಾಗಿ, ಒಂದು ರಾಷ್ಟ್ರೀಯ ದುರಂತವಾಯಿತು. ದೇಶದ ಸುರಕ್ಷತೆ ಮತ್ತು ಕಾರ್ಯತಂತ್ರದ ಮೇಲೆ ಈ ದಾಳಿ ಗಂಭೀರ ಪರಿಣಾಮಗಳನ್ನು ಬೀರಿದೆ.
ಭಾರತದ ಬಳಿ ಪ್ರಬಲ ಸೇನೆ ಮತ್ತು ಉತ್ತಮ ಗುಪ್ತಚರ ವ್ಯವಸ್ಥೆ ಇದೆ. ಆದರೆ, ಇದರಿಂದ ಅತ್ಯಂತ ಭದ್ರತೆ ಹೊಂದಿರುವ ಪ್ರದೇಶದಲ್ಲಾದ ಅನಿರೀಕ್ಷಿತವಾದ ದಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ಪಹಲ್ಗಾಮ್ ದಾಳಿ ಇದ್ದಕ್ಕಿದ್ದಂತೆ ಸಂಭವಿಸಿದ್ದು, ಅದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇತ್ತೀಚೆಗೆ ಸುಂದರ ಕಾಶ್ಮೀರ ಪ್ರಶಾಂತವೂ ಆಗಿದ್ದು, ನಾಯಕರು ಎಲ್ಲವೂ ಸರಿಯಾಗಿದೆ ಎಂದೇ ಭಾವಿಸಿದ್ದರು. ಆದರೆ ಈ ದಾಳಿ ಅಪಾಯಕಾರಿ ಭಯೋತ್ಪಾದಕ ಗುಂಪುಗಳು ದಾಳಿ ನಡೆಸಲು ಹೇಗೆ ತೋಳಗಳಂತೆ ಅವಕಾಶಕ್ಕಾಗಿ ಕಾಯುತ್ತಿದ್ದವು ಎನ್ನುವುದನ್ನು ತೆರೆದಿಟ್ಟಿದೆ.
ಭಾರತ ಈಗ ಒಂದು ಮುಖ್ಯ ಪ್ರಶ್ನೆಯೊಂದನ್ನು ಕೇಳಲೇಬೇಕಿದೆ: ಮುಂದಿನ ಇಂತಹ ಅನಿರೀಕ್ಷಿತ ದಾಳಿಯನ್ನು ಹೇಗೆ ತಡೆಯಲು ಸಾಧ್ಯವಿಲ್ಲ? ಇದಕ್ಕೆ ಉತ್ತರ ಕೇವಲ ಹೆಚ್ಚಿನ ಸೈನಿಕರನ್ನು ನಿಯೋಜಿಸುವುದು ಮಾತ್ರವಲ್ಲ. ಬದಲಿಗೆ, ಉತ್ತಮ ಗುಪ್ತಚರ ವ್ಯವಸ್ಥೆಯನ್ನು ಹೊಂದುವುದು, ತಂಡವಾಗಿ ಕಾರ್ಯಾಚರಿಸುವುದು ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸುವುದಾಗಿದೆ. ಭಾರತ ಈಗ ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟಲಿಜೆನ್ಸ್ - ಎಐ) ಬಳಸುವ ಕುರಿತು ಹೆಚ್ಚಿನ ಗಮನ ಹರಿಸಬೇಕು. ಅಮೆರಿಕಾ ಮತ್ತು ಇಸ್ರೇಲ್‌ನಂತಹ ದೇಶಗಳು ಈಗಾಗಲೇ ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿಯಾಗಿ ಸೆಣಸಲು ಎಐ ಅನ್ನು ಬಳಸುತ್ತಿವೆ.
ಭಾರತ ತನ್ನ ಮುಖ್ಯ ಗುಪ್ತಚರ ಸಂಸ್ಥೆಗಳಾದ ರಾ, ಐಬಿ ಮತ್ತು ಎನ್ಐಎಗಳನ್ನು ಬಳಸಿಕೊಂಡು ಭಯೋತ್ಪಾದನೆಯ ವಿರುದ್ಧ ಸೆಣಸುತ್ತಿದೆ. ಅದರೊಡನೆ, ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನಾ ಪೀಡಿತ ಪ್ರದೇಶಗಳಿಗೆ ಯೋಧರನ್ನು ಕಳುಹಿಸುತ್ತದೆ. ಆದರೆ, ಇಂತಹ ವ್ಯವಸ್ಥೆಗಳು ಸಾಮಾನ್ಯವಾಗಿ ಭಯೋತ್ಪಾದನಾ ದಾಳಿ ನಡೆದ ಬಳಿಕ ಪ್ರತಿಕ್ರಿಯಿಸುತ್ತವೆ. ಈ ವ್ಯವಸ್ಥೆ ನಿಧಾನವಾಗಿದ್ದು, ಬೇರೆ ಬೇರೆ ಭಾಗಗಳಾಗಿ ಕಾರ್ಯಾಚರಿಸುತ್ತದೆ. ಇಂತಹ ವಿಧಾನ ಏನಾಯಿತು ಎಂದು ಪತ್ತೆಹಚ್ಚಲು ಪರಿಣಾಮಕಾರಿಯಾಗಿರಬಹುದು. ಆದರೆ, ಮುಂದೆ ಎಂತಹ ದಾಳಿ ಎದುರಾಗಬಹುದು ಎನ್ನುವುದನ್ನು ಮೊದಲೇ ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಅಪಾಯವನ್ನು ಮೊದಲೇ ಗುರುತಿಸಿ ಅದನ್ನು ತಡೆಯುವ ಬದಲು, ಅಪಾಯಕ್ಕಾಗಿ ಕಾಯುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದ ಗಮನ ಹೊಸ ರಸ್ತೆಗಳನ್ನು ನಿರ್ಮಿಸುವತ್ತ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವತ್ತಲೇ ಇತ್ತು. ಇಂತಹ ಅಭಿವೃದ್ಧಿ ಮುಖ್ಯವಾದರೂ, ಅಭಿವೃದ್ಧಿಯೊಡನೆ ಉತ್ತಮ ಸುರಕ್ಷತೆ ಮತ್ತು ಅಪಾಯಗಳನ್ನು ಗುರುತಿಸುವ ವ್ಯವಸ್ಥೆಯನ್ನೂ ಹೊಂದಬೇಕು. ಅದರಲ್ಲೂ ದೂರದ, ಅಪಾಯಕರ ಪ್ರದೇಶಗಳಲ್ಲಿ ಇದರ ಅವಶ್ಯಕತೆ ಹೆಚ್ಚಾಗಿದೆ. ಬೈಸರನ್ ಕಣಿವೆಯನ್ನು ಕೇವಲ ಕಾಲ್ನಡಿಗೆ ಅಥವಾ ಕುದುರೆ ಸವಾರಿಯ ಮೂಲಕ ಮಾತ್ರವೇ ತಲುಪಲು ಸಾಧ್ಯವಿದ್ದು, ಅದರ ಸುತ್ತಲೂ ದಟ್ಟ ಅರಣ್ಯವಿದೆ. ಈ ಕಣಿವೆಗೆ ಉತ್ತಮ ರಕ್ಷಣಾ ವ್ಯವಸ್ಥೆಯಿಲ್ಲ. ಆದ್ದರಿಂದಲೇ ಇದು ಭಯೋತ್ಪಾದಕರಿಗೆ ಸುಲಭ ಗುರಿಯಾಯಿತು. ಭಾರತ ಗುರುತಿಸದ ದೌರ್ಬಲ್ಯವನ್ನು ದುರದೃಷ್ಟವಶಾತ್ ಭಯೋತ್ಪಾದಕರು ಗುರುತಿಸಿದ್ದರು.
ಭಾರತಕ್ಕೆ ಹೋಲಿಸಿದರೆ, ಇಸ್ರೇಲ್ ಸಾಕಷ್ಟು ಸಣ್ಣ ದೇಶವಾಗಿದ್ದು, ಕಡಿಮೆ ಸಂಪನ್ಮೂಲಗಳನ್ನು ಹೊಂದಿದೆ. ಆದರೆ ಇಸ್ರೇಲ್ ಭಾರತಕ್ಕಿಂತಲೂ ಗಂಭೀರವಾದ ಭದ್ರತಾ ಅಪಾಯಗಳನ್ನು ಎದುರಿಸುತ್ತದೆ. ಇಸ್ರೇಲ್ ಫೋನ್ ಮಾಹಿತಿಗಳನ್ನು, ಉಪಗ್ರಹ ಚಿತ್ರಗಳನ್ನು, ಮತ್ತು ಆನ್‌ಲೈನ್ ಸಂದೇಶಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ಅಧ್ಯಯನ ಮಾಡುವ ಯುನಿಟ್ 8200 ಎಂಬ ಸ್ಮಾರ್ಟ್ ವ್ಯವಸ್ಥೆಯನ್ನು ಬಳಸುತ್ತದೆ. ಇದು ಇಸ್ರೇಲ್‌ಗೆ ಅಸಹಜ ವರ್ತನೆಗಳನ್ನು ಗುರುತಿಸಲು ಮತ್ತು ದಾಳಿಗಳನ್ನು ಆಗುವ ಮುನ್ನವೇ ತಡೆಯಲು ನೆರವಾಗುತ್ತದೆ.
ಇಸ್ರೇಲ್ ಹೊಸ ಮಾಹಿತಿಗಳನ್ನು ಭಯೋತ್ಪಾದನಾ ಚಟುವಟಿಕೆಗಳ ಹಳೆಯ ದಾಖಲೆಗಳೊಡನೆ ಪರಿಶೀಲಿಸಿ, ದಾಳಿಗಳನ್ನು ಬೇಗನೆ ತಡೆಗಟ್ಟುತ್ತದೆ. ಇಸ್ರೇಲಿನ ಗಡಿಗಳು ಸ್ಮಾರ್ಟ್ ಕ್ಯಾಮರಾಗಳು ಮತ್ತು ಹೀಟ್ ಸೆನ್ಸರ್‌ಗಳನ್ನು ಹೊಂದಿದ್ದು, ಅವುಗಳು ಮನುಷ್ಯ, ಪ್ರಾಣಿ, ಅಥವಾ ವಾಹನಗಳನ್ನು ನಿಖರವಾಗಿ ಗುರುತಿಸಬಲ್ಲವು. ಇಸ್ರೇಲನ್ನು ನಿರಂತರವಾಗಿ ಸುರಕ್ಷಿತವಾಗಿಡಲು ಈ ಉಪಕರಣಗಳನ್ನು ಪ್ರತಿದಿನವೂ ಅಪಾಯಕಾರಿ ಪ್ರದೇಶಗಳಲ್ಲಿ ಬಳಸಲಾಗುತ್ತದೆ.
ಅಮೆರಿಕಾ ಸಹ ಪ್ರಾಜೆಕ್ಟ್ ಮಾವೆನ್ ಎಂಬ ವ್ಯವಸ್ಥೆಯನ್ನು ಬಳಸುತ್ತಿದ್ದು, ಇದನ್ನು ಅಮೆರಿಕಾದ ರಕ್ಷಣಾ ಇಲಾಖೆ ನಿರ್ವಹಿಸುತ್ತಿದೆ. ಇದು ಎಐ ಬಳಸಿಕೊಂಡು ಡ್ರೋನ್ ವೀಡಿಯೋಗಳನ್ನು ವೀಕ್ಷಿಸುತ್ತದೆ. ಇದು ವಾಹನಗಳನ್ನು, ಆಯುಧಗಳನ್ನು, ಅಥವಾ ಯುದ್ಧದ ಪ್ರದೇಶಗಳಲ್ಲಿರುವ ಜನರನ್ನು ಗುರುತಿಸಲು ನೆರವಾಗುತ್ತದೆ. ಇದು ವಿಶೇಷ ಎಐ ಉಪಕರಣಗಳನ್ನು ಬಳಸಿಕೊಂಡು ವಿವಿಧ ವೆಬ್‌ಸೈಟ್‌ಗಳಲ್ಲಿ, ಗುಪ್ತ ವೇದಿಕೆಗಳಲ್ಲಿ, ಮತ್ತು ಚಾಟ್ ಗ್ರೂಪ್‌ಗಳಲ್ಲಿರುವ ಸಂದೇಶಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ. ಈ ರೀತಿ ಮಾಡುವುದರಿಂದ, ಅಮೆರಿಕಾ ಭಯೋತ್ಪಾದಕ ದಾಳಿಗಳು ಕಾರ್ಯರೂಪಕ್ಕೆ ಬರುವ ಮುನ್ನವೇ ಅವುಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ಅಮೆರಿಕಾದಲ್ಲಿ ಎನ್ಎಸ್ಎ (ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ) ಮತ್ತು ಡಿಎಚ್ಎಸ್ (ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ) ನಂತಹ ಸಂಸ್ಥೆಗಳು ಪ್ರಿಡಿಕ್ಟಿವ್ ಪೊಲೀಸಿಂಗ್ ಎಂಬ ವಿಶೇಷ ವ್ಯವಸ್ಥೆಯನ್ನು ಬಳಸುತ್ತವೆ. ಈ ಉಪಕರಣಗಳು ಜನರ ವರ್ತನೆ ಮತ್ತು ಅವರ ಪ್ರಯಾಣದ ಹಿನ್ನೆಲೆಗಳನ್ನು ಗಮನಿಸಿ, ಸಂಭಾವ್ಯ ಅಪಾಯಗಳನ್ನು ಮೊದಲೇ ಗುರುತಿಸುತ್ತವೆ. ಕೆಲವೊಂದು ಜನರು ಈ ವ್ಯವಸ್ಥೆ ವಿವಾದಾತ್ಮಕವಾಗಿದೆ ಎಂದಿದ್ದರೂ, ಗಂಭೀರ ರಾಷ್ಟ್ರೀಯ ಭದ್ರತಾ ಪರಿಸ್ಥಿತಿಗಳಲ್ಲಿ ಇದು ಪ್ರಯೋಜನಕಾರಿಯಾಗಿದೆ.
ಎಐ ಹೇಗೆ ಭಾರತದ ಭದ್ರತೆಯನ್ನು ವೃದ್ಧಿಸಬಲ್ಲದು?
ಭಾರತದ ಬಳಿ ಹಲವಾರು ಕುಶಲ ಇಂಜಿನಿಯರ್‌ಗಳು, ಡೇಟಾ ತಜ್ಞರು, ಎಐ ಸ್ಟಾರ್ಟಪ್‌ಗಳು, ಮತ್ತು ಡಿಆರ್‌ಡಿಓ ಮೂಲಕ ಪ್ರಬಲ ಮಿಲಿಟರಿ ಸಂಶೋಧನಾ ವ್ಯವಸ್ಥೆಗಳಿವೆ. ಆದ್ದರಿಂದ ಭಾರತಕ್ಕೆ ಆಧುನಿಕ ವ್ಯವಸ್ಥೆಗಳನ್ನು ನಿರ್ಮಿಸುವ ಮತ್ತು ಬಳಸುವ ಸಾಮರ್ಥ್ಯ ಲಭಿಸುತ್ತದೆ. ಆದರೆ, ಭಾರತ ಕ್ಷಿಪ್ರ ಕ್ರಮ ಮತ್ತು ನಾಯಕರು ಹಾಗೂ ವಿವಿಧ ವಿಭಾಗಗಳ ನಡುವೆ ಸಮನ್ವಯದ ಕೊರತೆಯನ್ನು ಹೊಂದಿದೆ.
ಇಂಡಿಯಾ ಇನ್ ಎ ನ್ಯೂ ಕೀ: ನೆಹರೂ ಟು ಮೋದಿ ಕೃತಿಯ ಲೇಖಕರಾದ ನಾರಾಯಣ್ ಬಾತ್ರಾ ಅವರು ಎಐ ಹೇಗೆ ಭಾರತಕ್ಕೆ ಭಯೋತ್ಪಾದನೆಯ ವಿರುದ್ಧ ಸೆಣಸಲು ನೆರವಾಗಬಹುದು ಎಂಬ ಐದು ಅಂಶಗಳನ್ನು ವಿವರಿಸಿದ್ದಾರೆ.
1. ಊಹಾತ್ಮಕ ಮಾದರಿ: ಎಐ ವಿಚಿತ್ರ ಅಥವಾ ಅಸಹಜ ವರ್ತನೆಗಳನ್ನು ಗುರುತಿಸಬಲ್ಲದು. ಉದಾಹರಣೆಗೆ, ಯಾರಾದರೂ ಪದೇ ಪದೇ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದರೆ, ಅಥವಾ ಮುಖ್ಯ ಪ್ರದೇಶಗಳ ಕುರಿತು ರಹಸ್ಯ ಗುಂಪುಗಳಲ್ಲಿ ಸಮಾಲೋಚನೆ ನಡೆಸಿದರೆ, ಅಥವಾ ಕೆಲವು ನಿರ್ದಿಷ್ಟ ಮಾರ್ಗಗಳ ಕುರಿತು ಪದೇ ಪದೇ ಪರೀಕ್ಷಿಸುತ್ತಿದ್ದರೆ, ಎಐ ಅವುಗಳನ್ನು ಗುರುತಿಸಬಲ್ಲದು. ಇಂತಹ ಸಂಕೇತಗಳು ಸಂಭಾವ್ಯ ಅಪಾಯದ ಆರಂಭಿಕ ಎಚ್ಚರಿಕೆಗಳಾಗಿರಬಹುದು.
2. ಡ್ರೋನ್ ಐಎಸ್ಆರ್ (ಇಂಟಲಿಜೆನ್ಸ್, ಸರ್ವಯಲೆನ್ಸ್, ರಿಕಾನಸನ್ಸ್): ಕ್ಯಾಮರಾಗಳನ್ನು ಹೊಂದಿರುವ, ಸ್ವಯಂ ಹಾರಾಟ ನಡೆಸಬಲ್ಲ ಡ್ರೋನ್‌ಗಳು ಬೈಸರನ್ ಕಣಿವೆಯಂತಹ ಪ್ರದೇಶಗಳ ಮೇಲೆ ಕಣ್ಣಿಡಬಲ್ಲವು. ಅವುಗಳು ಏನಾದರೂ ಒಂದು ಗುಂಪು ಜನರನ್ನು ಗಮನಿಸಿದರೆ, ಅಥವಾ ಗುಂಡಿನ ಸದ್ದು ಕೇಳಿದರೆ, ಅಥವಾ ಅಲ್ಲಿ ಇರಬಾರದ ವ್ಯಕ್ತಿಗಳನ್ನು ಗುರುತಿಸಿದರೆ, ಅವುಗಳು ನಿಯಂತ್ರಣ ಕೇಂದ್ರಕ್ಕೆ ಎಚ್ಚರಿಕೆ ಕಳುಹಿಸಬಲ್ಲವು.
3. ಮುಖ ಗುರುತಿಸುವಿಕೆ ಮತ್ತು ಬಯೋಮೆಟ್ರಿಕ್ ಖಾತ್ರಿ: ಎಐ ಬಸ್ ನಿಲ್ದಾಣಗಳು, ಹೊಟೆಲ್‌ಗಳು, ಮತ್ತು ದೇವಾಲಯಗಳಲ್ಲಿರುವ ಕ್ಯಾಮರಾಗಳ ಚಿತ್ರಣವನ್ನು ಪರಿಶೀಲಿಸಿ, ಅವುಗಳನ್ನು ಅನುಮಾನಾಸ್ಪದ ವ್ಯಕ್ತಿಗಳೊಡನೆ ಹೋಲಿಸಬಲ್ಲದು. ಒಂದು ವೇಳೆ ದಾಖಲೆಯಲ್ಲಿರುವ ಅನುಮಾನಾಸ್ಪದ ವ್ಯಕ್ತಿಗಳು ಯಾರಾದರೂ ಕಾಣಿಸಿಕೊಂಡರೆ, ಎಐ ತಕ್ಷಣವೇ ಅಧಿಕಾರಿಗಳಿಗೆ ಮುನ್ಸೂಚನೆ ನೀಡಬಲ್ಲದು.
4. ಸಾಮಾಜಿಕ ಜಾಲತಾಣ ಮತ್ತು ಡಾರ್ಕ್ ವೆಬ್ ಗಮನಿಸುವಿಕೆ: ಕಾಶ್ಮೀರಿ, ಉರ್ದು ಮತ್ತು ಪಂಜಾಬಿಯಂತಹ ಸ್ಥಳೀಯ ಭಾಷೆಗಳಲ್ಲಿರುವ ರಹಸ್ಯ ಸಂದೇಶಗಳನ್ನು ಪತ್ತೆಹಚ್ಚಲು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (ಎನ್ಎಲ್‌ಪಿ) ಯಂತಹ ಎಐ ವ್ಯವಸ್ಥೆಗಳನ್ನು ಬಳಸಬೇಕು. ಈ ಎಐ ಉಪಕರಣಗಳು ರಹಸ್ಯ ಸಂದೇಶಗಳು, ಪ್ರೊಪಗಾಂಡ, ಅಥವಾ ಸಾಮಾಜಿಕ ಜಾಲತಾಣಗಳು, ಆ್ಯಪ್‌ಗಳ ಮೂಲಕ ಮೂಲಭೂತ ಸಿದ್ಧಾಂತಗಳನ್ನು ಹರಡುವ ವಿಚಾರಗಳನ್ನು ಗುರುತಿಸಲು ಶಕ್ತವಾಗಿವೆ.
5. ಸ್ಮಾರ್ಟ್ ಗಡಿ ರಕ್ಷಣೆ: ಹೀಟ್ ಸೆನ್ಸರ್‌ಗಳು ಮತ್ತು ರೇಡಾರ್‌ಗಳನ್ನು ಬಳಸುವ ಎಐ ವ್ಯವಸ್ಥೆಗಳನ್ನು ಶತ್ರುಗಳು ಒಳ ನುಗ್ಗಬಲ್ಲ ಸ್ಥಳಗಳಿಗೆ ಅಳವಡಿಸಬೇಕು. ಇವುಗಳು ಚಲನವಲನಗಳನ್ನು ಗುರುತಿಸಿ, ಕೇಂದ್ರೀಯ ಮಿಲಿಟರಿ ನಿಯಂತ್ರಣ ಕೇಂದ್ರಗಳಿಗೆ ಎಚ್ಚರಿಕೆ ಸಂದೇಶಗಳನ್ನು ರವಾನಿಸಬಲ್ಲವು.
ಭದ್ರತೆಯಲ್ಲಿ ಎಐ ಬಳಸುವುದು ಎಂದರೆ ಕೇವಲ ಹೊಸ ಯಂತ್ರಗಳನ್ನಾಗಲಿ, ಸಾಫ್ಟ್‌ವೇರ್‌ಗಳನ್ನಾಗಲಿ ಗಳಿಸುವುದಲ್ಲ. ಇದಕ್ಕಾಗಿ ಸಂಪೂರ್ಣ ಪ್ರಕ್ರಿಯೆಯಲ್ಲೇ ಬದಲಾವಣೆ ತರಬೇಕಿದೆ. ಭಾರತ ಒಂದು ರಾಷ್ಟ್ರೀಯ ಎಐ ಕಮಾಂಡ್ ಸೆಂಟರ್ ಅನ್ನು ಆರಂಭಿಸಬೇಕು. ಇದು ರಾ, ಐಬಿ, ರಾಜ್ಯಗಳ ಪೊಲೀಸ್ ಇಲಾಖೆ, ಮತ್ತು ಸೈಬರ್ ತಂಡಗಳಿಂದ ಮಾಹಿತಿಗಳನ್ನು ಒಂದೆಡೆ ಲಭ್ಯವಾಗುವಂತೆ ಮಾಡಬೇಕು. ಆ ಮೂಲಕ ಅಪಾಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ.
ಈ ನೂತನ ಏಜೆನ್ಸಿ ವೇಗವಾಗಿ ಕಾರ್ಯಾಚರಿಸಿದರೂ, ಜವಾಬ್ದಾರಿಯುತವಾಗಿ ಕಾರ್ಯಾಚರಿಸಬೇಕು. ಅಂತಿಮ ಕ್ರಮಗಳು ಎಐ ಮತ್ತು ಮಾನವ ಇಬ್ಬರ ನಿರ್ಧಾರಗಳನ್ನು ಆಧರಿಸಿರಬೇಕು. ತಂತ್ರಜ್ಞಾನದ ಬಳಕೆಯೊಡನೆ ಮಾನವ ಹಕ್ಕುಗಳ ರಕ್ಷಣೆಯೂ ಮುಖ್ಯವಾಗಿರುತ್ತದೆ. ಎಐಯನ್ನು ದುರ್ಬಳಕೆ ಮಾಡಿಕೊಳ್ಳಬಹುದು ಮತ್ತು ಅದು ಪಕ್ಷಪಾತವನ್ನೂ ಪ್ರದರ್ಶಿಸಬಹುದು. ಆದ್ದರಿಂದ ಸಾಮಾನ್ಯ ಜನರ ಮೇಲೆ ಎಐ ಕಣ್ಣಿಡುವಾಗ ಸ್ಪಷ್ಟ ಕಾನೂನುಗಳು, ನೈತಿಕ ನಿಯಮಗಳು, ಮತ್ತು ಸರ್ಕಾರಿ ಮೇಲ್ವಿಚಾರಣೆ ಇರಬೇಕು.
ಬೈಸರನ್ ಕಣಿವೆಯ ದಾಳಿಯನ್ನು ಇನ್ನೊಂದು ಸುದ್ದಿ ಎಂಬಂತೆ ಭಾರತ ಮರೆತು ಮುಂದೆ ಸಾಗಬಾರದು. ಇದು ದೇಶಕ್ಕೊಂದು ಎಚ್ಚರಿಕೆಯ ಗಂಟೆಯಾಗಿರಬೇಕು. ಭಾರತ ಹೆಚ್ಚಾಗಿ ಯೋಧರನ್ನು ಬಳಸುವುದಕ್ಕಿಂತಲೂ ಸ್ಮಾರ್ಟ್ ತಂತ್ರಜ್ಞಾನಗಳನ್ನು ಬಳಸಿ, ದಾಳಿಗಳು ನಡೆಯುವ ಮುನ್ನವೇ ಅವುಗಳನ್ನು ತಡೆಯಬೇಕು. ಇಂದಿನ ಜಗತ್ತಿನಲ್ಲಿ ಭಯೋತ್ಪಾದನೆಯ ವಿರುದ್ಧದ ಹೋರಾಟ ಎಂದರೆ ಅದು ಬಂದೂಕಿಗೆ ಸೀಮಿತವಲ್ಲ. ಭಯೋತ್ಪಾದನಾ ನಿಗ್ರಹದಲ್ಲಿ ಕಂಪ್ಯೂಟರ್ ವ್ಯವಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ. ಭಯೋತ್ಪಾದಕರು ಮೌನವಾಗಿಯೇ ತಮ್ಮ ಮುಂದಿನ ದಾಳಿಯನ್ನು ಯೋಜಿಸುತ್ತಿರುವಾಗ ಭಾರತವೂ ಕ್ಷಿಪ್ರವಾಗಿ, ಗಂಭೀರವಾಗಿ ಕಾರ್ಯಾಚರಿಸಿ, ಅದನ್ನು ತಡೆಗಟ್ಟಬೇಕು.
ಪಾಕಿಸ್ತಾನಿ ಅಧಿಕಾರಿಗಳನ್ನು ಹಿಂದಕ್ಕೆ ಕಳುಹಿಸುವ, ಪಾಕಿಸ್ತಾನಿಯರ ವೀಸಾ ರದ್ದುಗೊಳಿಸುವ, ಮತ್ತು ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದವನ್ನು ಅಮಾನತುಗೊಳಿಸುವಂತಹ ಭಾರತದ ರಾಜತಾಂತ್ರಿಕ ಹೆಜ್ಜೆಗಳು ಬಲವಾದ ಸಂದೇಶವನ್ನೇ ರವಾನಿಸಿವೆ. ಆದರೆ ಭವಿಷ್ಯದ ದಾಳಿಗಳನ್ನು ತಡೆಗಟ್ಟಲು ಇವಿಷ್ಟೇ ಕ್ರಮಗಳು ಸಾಕಾಗದು. ಭಾರತ ಆಧುನಿಕ ಎಐ ತಂತ್ರಜ್ಞಾನಗಳನ್ನು ಬಳಸಿಕೊಂಡು, ಅಪಾಯಗಳನ್ನು ಮೊದಲೇ ಗುರುತಿಸಿ, ಅವುಗಳು ಕಾರ್ಯಗತಗೊಳ್ಳುವ ಮುನ್ನವೇ ತಡೆಗಟ್ಟಬೇಕು.
ಭಾರತ ಒಂದು ಹೊಸದಾದ ವಿಧಾನದಲ್ಲಿ ಆಲೋಚಿಸುವ ಅಗತ್ಯವಿದ್ದು, ಅದರಲ್ಲಿ ಎಐ ಕೇವಲ ಒಂದು ವ್ಯವಸ್ಥೆ ಮಾತ್ರವೇ ಆಗಿರದೆ, ನಮ್ಮ ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು. ಎಐ ಬಾಹ್ಯಾಕಾಶದಿಂದ ವೀಕ್ಷಿಸುವ, ಡ್ರೋನ್ ಮೂಲಕ ಕಣ್ಣಿಡುವ, ಜನರ ವರ್ತನೆಗಳ ಅಧ್ಯಯನ ನಡೆಸುವ, ಮತ್ತು ಆನ್‌ಲೈನ್ ಅಪಾಯಗಳನ್ನು ಗುರುತಿಸುವಂತಹ ವಿವಿಧ ಕಾರ್ಯಗಳನ್ನು ನಡೆಸಬಲ್ಲದು. ಎಐ ಅಪಾಯ ಸಂಭವಿಸುವ ಮುನ್ನವೇ ಅದನ್ನು ಗುರುತಿಸಲು ಭಾರತಕ್ಕೆ ನೆರವಾದೀತು.
ಇಂತಹ ಕ್ರಮಗಳನ್ನು ಕಾರ್ಯಗತಗೊಳಿಸುವುದು ಈಗ ಭಾರತದ ಕೈಯಲ್ಲಿದೆ!
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.